ಗೆಳೆಯರೇ, ಒಂದು ಭಾಷೆ ಸಮ್ರುಧ್ಧವಾಗಬೇಕಾದರೆ, ಜಗತ್ತಿನ ಸರ್ವ ವಿಷಯಗಳನ್ನು ಅದು ತನ್ನೊಳಗೆ ಅಡಗಿಸಿಕೊಳ್ಳಬೇಕು. ಆದರೆ ಕನ್ನಡ ಚಿತ್ರರಂಗದವರ ಸ್ವಾರ್ಥ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಕನ್ನಡ ಭಾಷೆಯೇ ಬಡವಾಗಿದೆ. ಶ್ರವಣ ಮತ್ತು ದ್ರುಶ್ಯ ಮಾಧ್ಯಮವು ಅಕ್ಷರ ಮಾಧ್ಯಮಕ್ಕಿಂತ ಪ್ರಭಾವಶಾಲಿಯಾಗಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಈಗ ಕನ್ನಡವನ್ನು ಕಾಪಾಡಬೇಕಾಗಿರುವುದು, ಹೊರಗಿನವರಿಂದಲ್ಲ ಕನ್ನಡ ಚಿತ್ರರಂಗದವರಿಂದ. ಹೌದು. ನಾನು ಹೇಳುತ್ತಿರುವುದು ಕರ್ನಾಟಕದಲ್ಲಿ ಡಬ್ಬಿಂಗ ಚಿತ್ರಗಳನ್ನು ದೂರವಿಟ್ಟಿರುವುದರ ಬಗ್ಗೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಹೊಡೆತ ಬೀಳುತ್ತದೆ ಅದು ಬೇಡ ಅಂತನೇ ಹೆಚ್ಚಿನವರು ನಂಬಿದ್ದಾರೆ. ಬೆಂಗಳೂರಿನ ಕೆಲವು ಜನರನ್ನು ಕಾಯುವ ಹೊಣೆ ಹೊತ್ತು ಕನ್ನಡ ತಾಯಿ ಭುವನೇಶ್ವರಿ ಕ್ರುಷವಾಗಿದ್ದಾಳೆ. ಸ್ವಾಮಿ ಕನ್ನಡ ಚಿತ್ರರಂಗವನ್ನು ಒಂದು ಮುಕ್ತ ಅಖಾಡವಾಗಿಸಿರಿ, ಇದರಿಂದ ಭಾಷೆ ಸಮ್ರುದ್ಧಿಯಾಗಿ ಬೆಳೆಯುವುದಷ್ಟೇ ಅಲ್ಲ ಕನ್ನಡ ಚಿತ್ರೋದ್ಯಮವೂ ತೆಲುಗು ಮತ್ತು ತಮಿಳು ಚಿತ್ರರಂಗಗಳಂತೆ ವಿಶಾಲವಾಗುತ್ತದೆ. ದಯವಿಟ್ಟು ಕನ್ನಡವನ್ನು ನಮ್ಮದೇ ಚಿತ್ರೋದ್ಯಮದವರ ಕೈಯಿಂದ ಮುಕ್ತಗೊಳಿಸಿ, ಇಲ್ಲವಾದರೆ ಕನ್ನಡಕ್ಕೆ ಬೀಳುತ್ತಿರುವ ಹೊಡೆತಗಳು ಅವ್ಯಾಹತವಾಗಿ ಸಾಗಿರುತ್ತವೆ. ಇಂದು ಕನ್ನಡ ಚಿತ್ರರಂಗ ಬೆಳೆದಿದೆ, ಈಗಲಾದರೂ ಮುಕ್ತ ಸ್ಪರ್ದೆಗೆ ಸಿದ್ಧರಾಗಿ, ಕನ್ನಡ ನಾಡಿನಲ್ಲಿ ನಮ್ಮದಲ್ಲದ ಭಾಷೆಯಲ್ಲಿ ಚಿತ್ರ ನೋಡಬೇಕಾದ ವಿಪರ್ಯಾಸವನ್ನು ತಪ್ಪಿಸಿ. ತಮಿಳು ಮತ್ತು ತೆಲುಗು ಭಾಷೆಗಳು ತಮ್ಮ ಚಿತ್ರಗಳ ಮೂಲಕ ನಿರಂತರವಾಗಿ ಕರ್ನಾಟಕದೊಳಗೆ ನುಸುಳುತ್ತಿವೆ. ಅಪ್ಪಟ ಕನ್ನಡ ಒಳನಾಡುಗಳಲ್ಲೂ ಹೊರಗಿನ ಭಾಷೆಯ ಚಿತ್ರಗಳು ದಾಳಿ ನಡೆಸಿವೆ. ಆದರೆ ಕನ್ನಡ ಚಿತ್ರಗಳ ಮೂಲಕ ಅವರ ನಾಡಿಗೆ ವಿಚಾರಗಳು ತಲುಪುತ್ತವೆಯೇ ಹೊರತು ಭಾಷೆ ಕಿಂಚಿತ್ತೂ ಇಣುಕದು, ಅಂದ ಮೇಲೆ ಭಾಷೆಯ ಬೆಳವಣಿಗೆಯಾದರೂ ಹೇಗೆ ಸಾಧ್ಯ. ಚಿತ್ರರಂಗದವರ ಈ ಧೋರಣೆಯಿಂದ ಕನ್ನಡಕ್ಕೆ A.R.ರೆಹಮಾನ್ರಂತ ಅದ್ಭುತ ಪ್ರತಿಭೆಯ ಸಂಗೀತ ದೊರಕಿಲ್ಲ, ಅದೇ ತೆಲುಗು ಮತ್ತು ತಮಿಳು ರಂಗಗಳನ್ನು ನೋಡಿ, ಅವರು ಇಂಗ್ಲಿಷ್ ಚಿತ್ರಗಳನ್ನು ಮೊದಲುಗೊಂಡು ಎಲ್ಲವನ್ನು ತಮ್ಮ ಭಾಷೆಗೆ ಅಳವಡಿಸಿಕೊಂಡು ತಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿಕೊಂಡಿರುವುದಷ್ಟೇ ಅಲ್ಲದೇ ಅದರಿಂದ ಅವರ ಚಿತ್ರರಂಗ ಅದ್ಭುತ ಚಿತ್ರಗಳನ್ನು ನಿರ್ಮಿಸಲು ಅನುಕೂಲವಾಗಿದೆ. ಬೇರೆ ಭಾಷೆಯವರು,ಅವರೇ ಏಕೆ ನಮ್ಮವರೇ, ನಮ್ಮ ಚಿತ್ರಗಳನ್ನು ಅಸಡ್ಡೆ ಧೋರಣೆಯಿಂದ ನೋಡುವುದು ಇದೇ ಕಾರಣದಿಂದ. ಬೆಂಗಳೂರಿನ ಚಿದ್ರೋದ್ಯಮದವರೇಕೇ ಇಷ್ಟೊಂದು ಆತ್ಮವಿಶ್ವಾಸವಿಲ್ಲದರಾಗಿದ್ದಾರೆ. ಮುಂಚಿನಿಂದಲೂ ಡಬ್ಬಿಂಗಗೆ ಅವಕಾಶವಿದ್ದಲ್ಲಿ ಇಂದು ಕನ್ನಡ ಖಂಡಿತವಾಗಿ ಈ ಸ್ಥಿತಿಯಲ್ಲಿರುತ್ತಿರಲಿಲ್ಲ.
ಪರನಾಡಿನ ಲೇಖಕರು ಕನ್ನಡ ಸಾರಸ್ವತ ಲೋಕಕ್ಕೆ ಎಷ್ಟೋ ಕೊಡುಗೆ ನೀಡಿದ್ದಾರೆ, ಅದರಿಂದ ಕನ್ನಡ ಪುಸ್ತಕ ಲೋಕ ಶ್ರೀಮಂತವಾಗಿದೆ, ಕನ್ನಡದಲ್ಲಿ ಕನ್ನಡದವರು ಬರೆದ ಲೇಖನಗಳು ಮಾತ್ರ ಇರಬೇಕು, ಅಂತ ಆ ಬಾಗಿಲನ್ನೂ ಮುಚ್ಚಿದ್ದರೆ ಕನ್ನಡ ಇಂದು ಬದುಕಿರುತ್ತಿರಲಿಲ್ಲ. ಹೊಸದನ್ನು ತಿಳಿದುಕೊಳ್ಳಬೇಕೆಂಬ ಹಂಬಲ ಭಾಷಾಪ್ರೇಮವನ್ನೂ ಮೀರಿ ನಿಲ್ಲುತ್ತದೆ, ಭಾಷೆಯೆಂಬುದು ಒಂದು ಮಾಧ್ಯಮ ಮಾತ್ರ.ಕನ್ನಡಿಗರು ಭಾಷಾ ಪ್ರೇಮಿಗಳಲ್ಲ ಅಂತ ಎಲ್ಲರೂ ಮಾತನಾಡುತ್ತಾರೆ ಆದರೆ ಜಗತ್ತನ್ನು ಕನ್ನಡದಲ್ಲಿ ನೋಡುವ ಅವಕಾಶ ಕನ್ನಡಿಗನಿಲ್ಲ, ಇದೆಂತ ಇಬ್ಬಗೆತನ? ಈಗಲೂ ಕನ್ನಡ ಚಿತ್ರಗಳನ್ನು ನೋಡುವವರು ಬೇರೆ ಭಾಷೆ ಆಡದ ಮುಗ್ಧ ಹಳ್ಳಿಯ ಜನ ಮಾತ್ರ. ತೆಲುಗು ಮತ್ತು ತಮಿಳು ಚಿತ್ರರಂಗಗಳ ಪರಸ್ಪರ ವಿನಿಮಯದಿಂದ ಭಾಷೆಗಳು ಒಂದಕ್ಕೊಂದು ಪೂರಕವಾಗಿ ಬೆಳೆದಿವೆ. ಈಗಲಾದರೂ ನಮ್ಮ ಭಾಷೆಯನ್ನು ನಮ್ಮವರೇ ಮರೆಯುವ ಮುನ್ನ ಎಚ್ಚೆತ್ತುಕೊಳ್ಳಿ, ನಿಮ್ಮ ಕಪಿಮುಷ್ಟಿಯಿಂದ ಕನ್ನಡವನ್ನು ಬಿಡುಗಡೆಗೊಳಿಸಿ, ಕನ್ನಡಿಗರಿಗೆ ಕನ್ನಡ ಪ್ರೇಮದ ಹೆಸರಿನಲ್ಲಿ ಬೆಂಗಳೂರಿನಲ್ಲಿ ತಯಾರಾದ ಚಿತ್ರಗಳನ್ನು ಮಾತ್ರ ನೋಡಬೇಕೆಂಬ ಕಲ್ಲುಗುಂಡನ್ನು ಹೊರೆಸಬೇಡಿ, ಕನ್ನಡಿಗರಿಗೆ ಮತ್ತು ಕನ್ನಡ ಭಾಷೆಗೆ ಉಸಿರಾಡಲು ಅವಕಾಶ ಕೊಡಿ, ನಾವು ನಿಮ್ಮನ್ನೇನು ಮುಳುಗಿಸುವುದಿಲ್ಲ ಬದಲಾಗಿ ನೀವು (ಕನ್ನಡ ಚಿತ್ರರಂಗದವರು) ಇನ್ನೂ ಶ್ರೀಮಂತವಾಗುವಿರಿ. ಸ್ವಾಮಿ ಸಕಲ ಕನ್ನಡ ಪ್ರೇಮಿಗಳೇ, ಸಾಹಿತಿಗಳೇ, ಕನ್ನಡ ಅಭಿವ್ರುದ್ಧಿ ಮಂಡಳಿಯವರೇ, ಸಕಲ ಕನ್ನಡಿಗರೇ ಕನ್ನಡವನ್ನು ಕನ್ನಡ ಚಿತ್ರರಂಗದವರಿಂದ ಕಾಪಾಡಿ. ಕನ್ನಡಕ್ಕೆ ಬೆಳೆಯಲು ಅವಕಾಶ ನೀಡಿ.
ನನ್ನ ಬ್ಲಾಗ್ ನೋಡಿ ಹೌದು ಅನಿಸಿದರೆ ಸುಮ್ಮನಿರಬೇಡಿ, ಎಲ್ಲರಲ್ಲೂ ಈ ಬಗ್ಗೆ ಅರಿವು ಮೂಡಿಸಿ, ಕನ್ನಡ ಬೆಳಗಬೇಕೆನ್ನುವವರಿಗೆ ನಿಮಗೆ ತಿಳಿದಿರುವ ಸಕಲ ಮಾರ್ಗಗಳನ್ನು ಬಳಸಿ ತಿಳಿಸಿರಿ, ಜಯ ಕನ್ನಡಾಂಬೆ.
Subscribe to:
Post Comments (Atom)
No comments:
Post a Comment