Wednesday, August 09, 2006

ಚಿಲ್ಲರೆಯಾಗುತ್ತಿದ್ದೇನೆ-ಲಲಿತಾ ನಾಯಕ್

ಮಹಾದೇವಿಯಕ್ಕಗಳ ವಚನಗಳು ಎಂಬ ಹೊತ್ತಿಗೆಯಲ್ಲಿ ಈ ಪದ್ಯದ ಸಾಲಗಳನ್ನು ನೋಡಿದೆ,

ಪೈಸೆ ಪೈಸೆಯಾಗಿ ನಾ ವೃದ್ಧಿ ಹೊಂದುತ್ತಲಿದ್ದೆ
ಹತ್ತು-ನೂರರ ಮೊತ್ತವಾಗದಿದ್ದರೂ ಕೊನೆಗೆ
ರೂಪಾಯಿ ನೋಟಾದರೂ ಆಗುತ್ತಿದ್ದೆ
ಆದರೇನು ಗೆಳೆಯಾ, ತಾಳಿ ಕಟ್ಟಿದ ಕ್ಷಣದಿಂದಲೇ
ನೀ ನನ್ನ ಚಿಲ್ಲರೆಯಾಗಿಸಿಬಿಟ್ಟೆ!
ನನ್ನ ಬುದ್ಧಿ - ಕೌಶಲ - ಪ್ರಿತಿಭೆಗಳೇನಿದ್ದರೂ
ನಿನ್ನ ಹೊಟ್ಟೆ ನೆತ್ತಿ ಜೋಪಾನ ಮಾಡುವಷ್ಟಕ್ಕೆ
ನನ್ನ ಅಂಗಾಂಗಗಳು ನಿನ್ನ ಇಂದ್ರಿಯಗಳಿಗೆ
ಸ್ಪೂರ್ತಿ - ಚೇತನ, ಖುಷಿ ನೀಡುವಷ್ಟಕ್ಕೆ
ಸೀಮಿತವೆಂದು ನಿರ್ಣಯಿಸಿರುವ ನಿನ್ನ
ಶತಮಾನಗಳ ಗೊಡ್ಡು ನಂಬಿಕೆಗೆ
"ದಿಕ್ಕಾರ"ಕ್ಕಿಂತ ಮಿಗಿಲಾದ
ಶಕ್ತಿಯುತ ಶಬ್ದಕ್ಕಾಗಿ ಹುಡುಕುತ್ತಿದ್ದೇನೆ!
ಹಾಲುಣಿಸಿ ತಣಿಸುವ ನನ್ನ
ಜೀವಪೋಷಕ ಮೊಲೆಗಳಿಗಿಂತಲೂ
ಕತ್ತರಿಗೆ ಸಿಕ್ಕಿ ಕಸವಾಗಿ ಬಿಡಬಹುದಾದ
ನಿನ್ನ ಗಡ್ಡ ಮೀಸೆಗಳೇ ಮಿಗಿಲೆಂದು
ಬೀಗುವ ನಿನ್ನ ಮೂರ್ಖತನಕ್ಕೆ ಅಚ್ಚರಿಗೊಳ್ಳುತ್ತಿದ್ದೇನೆ
'ತಂದೆತನ' ನಿನ್ನ ಬದುಕಿನ ಒಂದಶ ಮಾತ್ರವಾದರೆ
ಆ ಮಾತು ಅನ್ವಯಿಸುವುದು ನನ್ನ 'ತಾಯ್ತಕ್ಕೂ'
ಎಂಬ ಕಿವಿಮಾತೊಂದ ಹೇಳಲು
ಸಮಯ ಕಾಯುತ್ತಿದ್ದೇನೆ.
--ಲಲಿತಾ ನಾಯಕ್

1 comment:

Sandeepa said...

ಅದ್ಭುತ!!
ಕಣ್ಣು ತೆರೆಸುವಂತ ಕವನ!!

ಧನ್ಯವಾದಗಳು ಇದನ್ನು ಇಲ್ಲಿ ಪ್ರಕಟಿಸಿದ್ದಕ್ಕೆ..